ಗಂಗನಾಥ ಝಾ-( 	1872-1941). ಸಂಸ್ಕøತ ಸಾಹಿತ್ಯದಲ್ಲೂ ದರ್ಶನ ಮುಂತಾದ ಶಾಸ್ತ್ರಗಳಲ್ಲೂ ನೈಪುಣ್ಯ ಪಡೆದು ಅಪಾರ ಪಾಂಡಿತ್ಯದ ನಿಧಿಯೆಂಬ ಕೀರ್ತಿಗಳಿಸಿದ ಮಹನೀಯರು. ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದು ಅಮೋಘ ಸಾರಸ್ವತ ಸೇವೆಯನ್ನಿವರು ಸಲ್ಲಿಸಿದರು. ಹುಟ್ಟಿದ್ದು ಬಿಹಾರಿನ ದರ್ಭಾಂಗ ಜಿಲ್ಲೆಯಲ್ಲಿ, ಶ್ರೋತ್ರಿಯ ವಂಶವೊಂದರಲ್ಲಿ ಬಾಲ್ಯದಿಂದಲೂ ಸಾಂಪ್ರದಾಯಿಕವಾಗಿ ಸಂಸ್ಕøತವನ್ನು ಅಧ್ಯಯನ ಮಾಡಿ, ಮುಂದೆ ದರ್ಭಾಂಗ ಮಹಾರಾಜರ ಪುಸ್ತಕ ಭಂಡಾರದಲ್ಲಿ ಗ್ರಂಥಪಾಲಕರಾಗಿ ನೇಮಕಗೊಂಡರು. ಮುಖ್ಯವಾಗಿ ಸಂಸ್ಕøತ ವಿದ್ಯಾರ್ಜನೆಯಲ್ಲಿ ಇವರಿಗಿದ್ದ ಆಸಕ್ತಿ ಶ್ರದ್ಧೆಗಳ ಅಭಿವ್ಯಕ್ತಿಗೆ ಅಲ್ಲಿ ಸೂಕ್ತ ಅವಕಾಶ ಲಭಿಸಿತಾಗಿ ಅದ್ವೀತಿಯ ಪಾಂಡಿತ್ಯವನ್ನು ಸಂಪಾದಿಸಿಕೊಂಡರು. ಅನೇಕ ಕಡೆಗಳಿಂದ ಇವರ ವಿದ್ವಂತ್ತಿಗೆ ಮನ್ನಣೆ ಗೌರವಗಳು ದೊರಕಿದವು; ಅನಂತರ ಇವರು ವಾರಾಣಸಿಯ ಸರ್ಕಾರಿ ಸಂಸ್ಕøತ ಕಾಲೇಜಿಗೆ ಮುಖ್ಯಾಧಿಕಾರಿಯಾಗಿ ನೇಮಕಗೊಂಡರು. ಆ ಸ್ಥಾನವನ್ನಲಂಕರಿಸಿದ ಭಾರತೀಯರಲ್ಲಿವರು ಮೊದಲಿಗರು. ತರುವಾಯ ಅಲಹಾಬಾದ್ ವಿಶ್ವವಿದ್ಯಾಲಯ ಕುಲಪತಿಗಳಾದರು. ಬನಾರಸ್ ವಿಶ್ವ ವಿದ್ಯಾಲಯ ಇವರಿಗೆ ಡಿ.ಲಿಟ್. ಪದವಿಯನ್ನು ಕೊಟ್ಟು ಗೌರವಿಸಿತು. ಸರ್ಕಾರದಿಂದ ಮಹಾಮಹೋಪಾಧ್ಯಾಯ ಎಂಬ ಮನ್ನಣೆಯೂ ಸರ್ ಬಿರುದೂ ಬಂದುವು. ಅನೇಕ ಶಿಷ್ಯರೂ ಮಿತ್ರರೂ ಸಹವಿದ್ವಾಂಸರೂ ಇವರ 60ನೆಯ ಜನ್ಮದಿನೋತ್ಸವ ಶುಭ ಸಂದರ್ಭದಲ್ಲಿ, ಪೌರಸ್ತ್ಯ ಸಾಹಿತ್ಯ, ಸಂಸ್ಕøತಿ ವಿಷಯಗಳನ್ನು ಕುರಿತ ಲೇಖನಗಳಿಂದ ಕೂಡಿದ ಗ್ರಂಥವೊಂದನ್ನು ಸಮರ್ಪಿಸಿ ತಮ್ಮ ಪ್ರೀತ್ಯಾದರಗಳನ್ನು ತೋರಿಸಿದರು. ಇವರ ಮರಣಾನಂತರ 1943ರ ನವಂಬರಿನಲ್ಲಿ ಇವರ ಸ್ಮರಾಣಾರ್ಥವಾಗಿ ಗಂಗಾನಾಥ ಝಾ ರಿಸರ್ಚ್ ಇನ್ಸ್‍ಟಿಟ್ಯೂಟ್ ಎಂಬ ಮಹಾ ಸಂಸ್ಥೆ ಇವರ ಗಣ್ಯಮಿತ್ರರಾಗಿದ್ದ ಪಂಡಿತ ಮದನ ಮೋಹನ ಮಾಲವೀಯ ಮುಂತಾದ ಮಹಾಪುರಷರ ಸಮ್ಮುಖದಲ್ಲಿ ಸ್ಥಾಪನೆಗೊಂಡಿತು.

	ಉದ್ದಾಮ ಪಾಂಡಿತ್ಯ, ಸರಳ ಜೀವನ ಇವು ಇವರ ವ್ಯಕ್ತಿತ್ವದ ಎರಡು ಮುಖಗಳಾಗಿದ್ದುವು. ಸಾಂಪ್ರದಾಯಿಕ ರೀತಿಯಲ್ಲಿ ಸಂಸ್ಕøತ ಶಿಕ್ಷಣವನ್ನು ಪಡೆದು ಆ ಕ್ರಮದಿಂದ ಬರುವ ಅಗಾಧತೆಯನ್ನು ತಮ್ಮ ಪಾಂಡಿತ್ಯಕ್ಕವರು ದೊರಕಿಸಿಕೊಂಡಿದ್ದರು, ವೈಜ್ಞಾನಿಕ ಸಂಶೋಧನೆ ಮುಂತಾದ ಪದ್ಧತಿಗಳಲ್ಲೂ ಪರಿಶ್ರಮ ಹೊಂದಿಅದಕ್ಕೆ ವೈಶಾಲ್ಯವುಂಟಾಗುವಂತೆ ಮಾಡಿಕೊಂಡಿದ್ದರು. ಸಾಂಪ್ರದಾಯಿಕ ಪಾಂಡಿತ್ಯದ ಆಳ, ಆಧುನಿಕ ವಿದ್ವತ್ತಿನ ವಿಸ್ತಾರ ಮತ್ತು ವೈವಿಧ್ಯ-ಇವುಗಳ ಮಧುರ ಸಮ್ಮಿಶ್ರವನ್ನು ಇವರಲ್ಲಿ ಕಾಣಬಹುದಾಗಿತ್ತು. ಸಾಹಿತ್ಯ ಸ್ಮøತಿಗಳು, ದರ್ಶನಗಳು ಮುಂತಾದ ಸಂಸ್ಕøತಿ ವಿದ್ಯಾ ವಿಭಾಗಗಳು ಇವರ ಅಧ್ಯಯನಕ್ಕೂ ಪ್ರಾವೀಣ್ಯಕ್ಕೂ ವಿಷಯಗಳಾಗಿದ್ದವು. ಪ್ರಾಚೀನ ಭಾರತದ ಸಾಹಿತ್ಯ, ಸಂಸ್ಕøತಿಗಳ ಬಗ್ಗೆ ಇವರು ರಚಿಸಿರುವ ಗ್ರಂಥಗಳು ಅಮೂಲ್ಯವೆನಿಸಿವೆ.

	ಘನತೆ ಗಾಂಭೀರ್ಯಗಳು ಇವರ ಸರಳ ಜೀವನಕ್ಕೆ ಮೆರುಗು ಕೊಟ್ಟಿದ್ದುವು. ಆಧುನಿಕ ಜೀವನದ ಕೆಲವು ಕ್ರಮಗಳಲ್ಲೊಂದಾದ ಅತಿಪ್ರಚಾರದಲ್ಲಿರುವರಿಗೆ ತಿರಸ್ಕಾರವಿತ್ತು ಸಚ್ಚಾರಿತ್ಯ, ಸರಳತೆ, ಔನ್ನತ್ಯ, ಗಾಂಭೀರ್ಯ ಇತ್ಯಾದಿ ಸದ್ಗುಣಗಳಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಇವರಿಗೆ ಭಾರತೀಯ ಸಂಸ್ಕøತಿಗನುಗುಣವಾದ ಸಾಧನೆ ಸಿದ್ಧಿಗಳು ಪ್ರಧಾನವೆನಿಸಿದ್ದವು ಇವರ ಜೀವಿತದ ಮತ್ತೊಂದು ವೈಶಿಷ್ಟ್ಯವೆಂದರೆ, ಪಂಡಿತ ಮದನಮೋಹನ ಮಾಲವೀಯ ಮುಂತಾದ ಮಹಾಮಹಿಮರ ಪರಮ ಸ್ನೇಹ. ಅಮರನಾಥ ಝಾ ಅವರು ಇವರ ಸುಪುತ್ರರಲ್ಲೊಬ್ಬರೆಂಬುದು ಇಲ್ಲಿ ಗಮನಿಸಬೇಕಾದ ವಿಷಯ.

	ಗಂಗಾನಾಥ ಝಾ ಅಧಿಕ ಸಂಖ್ಯೆಯಲ್ಲಿ ಉತ್ತಮ ಗ್ರಂಥಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಮುಖ್ಯವಾದ ಕೆಲವು ಹೀಗಿವೆ: ಶಾಂಡಿಲ್ಯನ ಭಕ್ತಿಸೂತ್ರ, ಜಯದೇವ ಪ್ರಸನ್ನ ರಾಘವ, ವಾತ್ಸ್ಯಾಯನ-ನ್ಯಾಯಭಾಷ್ಯ, ಮಂಡನಮಿಶ್ರ ವಿರಚಿತ ಮೀಮಾಂಸಾನುಕ್ರಮಣಿಕಾ-ಇವುಗಳಿಗೆ ಅನುಕ್ರಮವಾಗಿ ಇವರು ರಚಿಸಿರುವ ಭಕ್ತಿ ಕಲ್ಲೋಲೀನೀಭಾವಬೋಧಿನಿ, ಖದ್ಯೋತ, ಮೀಮಾಂಸಾಮಂಡನ ಎಂಬ ವ್ಯಾಖ್ಯಾನಗಳೂ ವೇಲಾ ಮಹಾತ್ಮ್ಯ ಎಂಬದೂ ಇವರ ಸ್ವತಂತ್ರಯ ಸಂಸ್ಕøತ ಕೃತಿಗಳು ಇಂಗ್ಲಿಷಿನ ಗ್ರಂಥಗಳೆಂದರೆ : ಪ್ರಾಭಾಕರ ಸ್ಕೂಲ್ ಆಫ್ ಪೂರ್ವಮೀಮಾಂಸಾ, ಸಾಧೋಲಾಲ್ ಲೆಕ್ಚರ್ಸ್ ಆನ್ ನ್ಯಾಯ, ಫಿಲಾಸಾಫಿಕಲ್ ಡಿಸಿಪ್ಲಿನ್ (ಕಮಲ ಲೆಕ್ಚರ್ಸ್, ಕಲ್ಕತ್ತ), ಹಿಂದೂ ಲಾ ಇನ್ ಇಟ್ಸ್ ಸೋರ್ಸಸ್; ಶಂಕರಾಚಾರ್ಯ ಅಂಡ್ ಹಿಸ್ ವರ್ಕ್ ಫಾರ್ ದಿ ಅಪ್‍ಲಿಫ್ಟ್ ಆಫ್ ದಿ ಕಂಟ್ರಿ.. ಇವರ ಇಂಗ್ಲಿಷ್ ಅನುವಾದರೂಪದ ಗ್ರಂಥಗಳಲ್ಲಿ ಮುಖ್ಯವಾದವು: ವಿಜ್ಞಾನ ಭಿಕ್ಷುವಿನ ಯೋಗಸಾರ ಸಂಗ್ರಹ, ಮಮ್ಮಟನ ಕಾವ್ಯಪ್ರಕಾಶ, ವಾಚಸ್ಪತಿಮಿಶ್ರ ಕೃತಸಾಂಖ್ಯತತ್ತ್ವಕೌಮುದೀ, ಶಂಕರಾಚಾರ್ಯರ ಛಾಂದೋಗ್ಯೋಪನಿಷದ್ ಭಾಷ್ಯ. ಕುಮಾರಿಲನ ಶ್ಲೋಕವಾರ್ತಿಕ, ವ್ಯಾಸರ ಯೋಗಸೂತ್ರಭಾಷ್ಯ, ಕೇಶವಮಿತ್ರನ ತರ್ಕಭಾಷಾ, ವಾಮನ ಕಾವ್ಯಾಲಂಕಾರಸೂತ್ರವೃತ್ತಿ, ಶ್ರೀಹರ್ಷನ ಖಂಡನಖಂಡಖಾದ್ಯ, ನ್ಯಾಯಸೂತ್ರಭಾಷ್ಯ ವಾರ್ತಿಕ, ನ್ಯಾಯಕಂದಲೀಸಮೇತ ಪ್ರಶಸ್ತಪಾದ ಭಾಷ್ಯ, ಮೇಧಾತಿಥಿ ಭಾಷ್ಯದೊಡನೆ ಮನುಸ್ಮøತಿ, ಕುಮಾರಿಲನ ತಂತ್ರವಾರ್ತಿಕ, ಶಬರಸ್ವಾಮಿಯ ಮೀಮಾಂಸಾಸೂತ್ರಭಾಷ್ಯ ಮತ್ತು ಶಾಂತರಕ್ಷಿತನ ತತ್ತ್ವ ಸಂಗ್ರಹ. ಝಾ ಅವರಿಂದ ಸಂಪಾದಿತವಾದ ಕೆಲವು ಗ್ರಂಥಗಳು : ಶಂಕರ ಕವಿಯ ಕವಿಕರ್ಪಟಿಕಾ, ಗೋಪಾಲನ್ಯಾಯಪಂಚಾನನ ಪ್ರಾಯಶ್ಚಿತ್ತ ಕದಂಬ, ಶಂಕರಾಚಾರ್ಯ ವಿರಚಿತ ಪಂಚೀಕರಣ, ಗೋಕುಲನಾಥನ ಅಮೃತೋದಯ, ಕೃಷ್ಣಯಜ್ವಕೃತ ಮೀಮಾಂಸ ಪರಿಭಾಷಾ, ಅಪದೇವನ ಮೀಮಾಂಸಾನ್ಯಾಯ ಪ್ರಕಾಶ, ಶಂಕರಮಿಶ್ರನ ವಾದಿವಿನೋದ, ಮಂಡನಮಿಶ್ರಕೃತ ಭಾವನಾವಿವೇಕ, ಜಯಂತಭಟ್ಟನ ನ್ಯಾಯಕಲಿಕಾ, ವಾತ್ಸಾಯನ ಭಾಷ್ಯದೊಡನೆ ನ್ಯಾಯಸೂತ್ರ, ಮತ್ತು ಪಾರ್ಥಸಾರಥಿಮಿಶ್ರರ ತಂತ್ರರತ್ನ (ಭಾಗ 1) ಅಲ್ಲದೆ ಇವರಿಂದ ಹಿಂದೀ, ಮೈಥಿಲೀ ಭಾಷೆಗಳಲ್ಲೂ ಗ್ರಂಥರಚನೆಯ ಮತ್ತು ಸಂಪಾದನೆಯ ಕೆಲಸ ನಡೆದಿದೆ. ಮತ್ತು ಇವರು ಇಂಡಿಯನ್ ಥಾಟ್ ಎಂಬ ಸಂಶೋಧನ ಪತ್ರಿಕೆಯ ಸಂಪಾದಕತ್ವವನ್ನೂ ಸ್ವಲ್ಪಕಾಲ ನಿರ್ವಹಿಸಿದರು.

	ಹೀಗೆ ಝಾ ಅವರು ಸಾಹಿತ್ಯ, ನ್ಯಾಯ, ಮೀಮಾಂಸಾ. ವೇದಾಂತ, ಅಲಂಕಾರ ಶಾಸ್ತ್ರ, ಧರ್ಮಶಾಸ್ತ್ರ ಮುಂತಾದ ಸಂಸ್ಕøತವಾಙ್ಮಯ ವಿಭಾಗಗಳಲ್ಲಿನ ಉದ್ಗ್ರಂಥಗಳಲ್ಲಿ ಕಂಡುಬರುವ ಗಹನ ವಿಚಾರಗಳನ್ನು ತಮ್ಮ ವಿದ್ವತ್ಪೂರ್ಣ ಗ್ರಂಥಸಂಪಾದನೆ, ವಿವರಣೆ, ವ್ಯಾಖ್ಯಾನ, ಅನುವಾದ ಮುಂತಾದ ಕ್ರಮಗಳಿಂದ ಬೆಳಕಿಗೆ ಬಂದು ಮಹದುಪಕಾರ ಮಾಡಿ ಎಲ್ಲರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಮಹಾ ವಿದ್ವಾಂಸರಾಗಿ, ಸರಳ ಜೀವನವನ್ನು ನಡೆಸಿ, ಸಂಸ್ಕøತದಲ್ಲಡಗಿರುವಂತೆ ಪ್ರಾಚೀನ ಭಾರತದ ಭವ್ಯಸಂಸ್ಕøತಿಯ ಮಹತ್ತ್ವವನ್ನು ದೇಶವಿದೇಶಗಳಲ್ಲಿ ಸಾರಿ, ದೇಶಸೇವೆ ಮಾಡಿ ಗಂಗಾನಾಥರು ಕೃತಕೃತ್ಯರಾದ ಪುಣ್ಯಾತ್ಮರೆನಿಸಿಕೊಂಡಿದ್ದಾರೆ. ಭಾರತದೇಶದ ಸುಪುತ್ರರ ಪರಂಪರೆಯಲ್ಲಿ ಇವರ ಸ್ಥಾನ ಹಿರಿದಾಗಿದೆಯಲ್ಲದೆ ಇವರ ಕೀತ್ರಿ ಆಚಂದ್ರಾರ್ಕವಾಗಿದೆ.	(ಬಿ.ಕೆ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ